ರಾಜಸ್ತಾನಿ
ರಾಜಸ್ತಾನ ರಾಜ್ಯದ ರಾಜ್ಯಭಾಷೆ. ರಾಜಸ್ತಾನದಾದ್ಯಂತ ಬಳಕೆಯಲ್ಲಿರುವ ಎಲ್ಲ ಪ್ರಮುಖ ಭಾಷೆಗಳನ್ನೂ ಸಾಮುದಾಯಿಕವಾಗಿ ರಾಜಸ್ತಾನಿ ಎಂದು ಕರೆಯಲಾಗುತ್ತದೆ. ರಾಜಸ್ತಾನಿ ಭಾಷೆಯ ಪ್ರಾಚೀನತೆಯನ್ನು ನಿರ್ಧರಿಸುವುದು ಕಷ್ಟ. 11ನೆಯ ಶತಮಾನದ ಪೂರ್ವಾರ್ಧದಲ್ಲಿ ಅಪಭ್ರಂಶದಿಂದ ಈ ಭಾಷೆ ಪ್ರತ್ಯೇಕಗೊಂಡು ಸ್ವತಂತ್ರ ಭಾಷೆಯಾಯಿತೆಂದು ಊಹಿಸಲಾಗಿದೆ. ಇದು ಆರ್ಯಭಾಷೆಯ ಒಂದು ಶಾಖೆಯಾಗಿದೆ. ಮಧ್ಯ ಪ್ರದೇಶ, ಸಿಂಧ್ ಮತ್ತು ಪಂಜಾಬಿನ ಅನೇಕ ಭಾಗಗಳಲ್ಲಿಯೂ ರಾಜಸ್ತಾನಿ ಭಾಷೆ ಪ್ರಚಲಿತವಿದೆ. ಇವುಗಳಲ್ಲಿ ಮಾಲವಿ, ಮಾರವಾಡಿ, ಮೇವಾತಿ, ಜೈಪುರಿ, ನಿಮಾಡಿ. ಸೌರಾಷ್ಟ್ರೀ ಮುಂತಾದ ಭಾಷೆಗಳು ಮುಖ್ಯವಾಗಿವೆ. ಇವುಗಳನ್ನು ಕ್ರಮವಾಗಿ ಮಾಲವಾದ, ಮಾರವಾಡ, ಮೇವಾಡ, ಜೈಪುರ ಮತ್ತು ನಿಮಾಡದ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಇವು ಹಿಂದೀ ಭಾಷೆಯ ಉಪಭಾಷೆಗಳು. ಇವು ಮೂಲತಃ ಒಂದೇ ತಾಯಿಭಾಷೆಯಿಂದ ಹುಟ್ಟಿ ಬೆಳೆದುಬಂದ ಭಾಷೆಗಳಾಗಿವೆ. ಈ ಭಾಷೆಗಳಲ್ಲಿ ಪಶ್ಚಿಮ ಹಿಂದೀ ಭಾಷೆಯ ಪ್ರಭಾವ ಹೆಚ್ಚಾಗಿ ಕಂಡುಬರುವುದು. ಇವುಗಳ ಜೊತೆಗೆ ಬೇರೆ ಬೇರೆ ಭಾಷೆ ಮತ್ತು ಉಪಭಾಷೆಗಳೂ ರಾಜಸ್ತಾನದಲ್ಲಿ ಬಳಕೆಯಲ್ಲಿವೆ. ರಾಜಸ್ತಾನಿ ಭಾಷೆಯನ್ನು ಸು. 3 ಕೋಟಿಗೂ ಹೆಚ್ಚು ಜನ ಮಾತನಾಡುತ್ತಾರೆ.

8ನೆಯ ಶತಮಾನದ `ಕುವಲಯಮಾಲಾ ಎಂಬ ಒಂದು ಅಪಭ್ರಂಶ ಗ್ರಂಥದಲ್ಲಿ ರಾಜಸ್ತಾನಿ ಭಾಷೆಯನ್ನು ಮರುಭಾಷೆ ಎಂದು ಕರೆಯಲಾಗಿದೆ. 15ನೆಯ ಶತಮಾನದ ಅನೇಕ ಸಾಹಿತ್ಯ ಗ್ರಂಥಗಳಲ್ಲಿ ರಾಜಸ್ತಾನಿ ಭಾಷೆಯನ್ನು ಮರುಭಾಷೆ, ಮರುಬಾಣಿ, ಮರುಬಾನಿ, ಮರುದೇಶೀಯ ಮುಂತಾದ ಹೆಸರುಗಳಿಂದ ಕರೆಯಲಾಗಿರುವ ಉಲ್ಲೇಖಗಳು ದೊರೆಯುತ್ತವೆ. ಡಿಂಗಲ್ ಭಾಷೆಯೊಡನೆ ಇವುಗಳ ಸಂಬಂಧವಿದ್ದಿತೆಂದು ಕೆಲವರ ಅಭಿಪ್ರಾಯ.

ರಾಜಸ್ತಾನಿ ಭಾಷಾಕ್ಷೇತ್ರ ಸಿಂಧ್, ಪಂಜಾಬ್, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರಗಳವರೆಗೆ ವ್ಯಾಪಿಸಿಕೊಂಡಿದ್ದರೂ ಈ ಕ್ಷೇತ್ರದಲ್ಲಿ ಸಿಂಧಿ, ಲಹಂದ, ಪಂಜಾಬಿ, ಬಾಂಗರೂ, ಬುಂದೇಲಿ, ಬ್ರಜ, ಮರಾಠಿ, ಗುಜರಾತಿ ಮುಂತಾದ ಭಾಷೆಗಳನ್ನು ಆಡುವ ಜನರಿದ್ದಾರೆ. ಆದ್ದರಿಂದ ಈ ಭಾಷೆಗಳ ಪ್ರಭಾವ ರಾಜಸ್ತಾನಿ ಭಾಷೆಯಲ್ಲಿ ಸಹಜವಾಗಿ ಕಂಡುಬರುತ್ತದೆ. ಅಲವರ್, ಗುಢಗಾವ್ ಭರತ್‍ಪುರ್, ಜಯಪುರ್, ಬುಂದಿ, ಕೊಟ. ಭೂಪಾಲ್, ಇಂದೋರ್, ಖಾನ್‍ದೇಶ, ಬಿರಾರ್, ಉದಯಪುರ್, ಜೈಸಲ್ಮೇರ್, ಜೋಧ್‍ಪುರ, ಬಿಕನೀರ್, ಸೌರಾಷ್ಟ್ರ, ನಿಮಾಡ್ ಮುಂತಾದ ಕಡೆಗಳಲ್ಲಿಯೂ ರಾಜಸ್ತಾನಿಯನ್ನು ಆಡುವವರು ಹೆಚ್ಚು ಸಂಖ್ಯೆಯಲ್ಲಿ ದೊರೆಯುತ್ತಾರೆ.

ಭಾರತೀಯ ಭಾಷೆಗಳ ಸರ್ವೇಕ್ಷಣಾ ಕಾರ್ಯವನ್ನು ನಡೆಸಿದ ಜಾರ್ಜ್ ಎ. ಗ್ರಿಯರ್‍ಸನ್ ರಾಜಸ್ತಾನದಲ್ಲಿ ಬಳಕೆಯಲ್ಲಿರುವ ಎಲ್ಲ ಭಾಷೆ ಮತ್ತು ಉಪಭಾಷೆಗಳನ್ನು ಸಾಮೂಹಿಕವಾಗಿ ರಾಜಸ್ತಾನಿ ಎಂದು ಹೆಸರಿಸಿದ್ದಾನೆ. ರಾಜಸ್ತಾನದಾದ್ಯಂತ ಬಳಕೆಯಲ್ಲಿರುವ ರಾಜಸ್ತಾನಿ ಭಾಷೆಗಳನ್ನು ಈತ ಮುಖ್ಯವಾಗಿ ಐದು ವರ್ಗಗಳಾಗಿ ವರ್ಗೀಕರಿಸಿದ್ದಾನೆ.
1. ಪಶ್ಚಿಮ ರಾಜಸ್ತಾನಿ : ಮಾರವಾಡಿ, ಢಟಕಿ, ಥಲಿ, ಬಿಕನೀರಿ, ಬಾಗಡಿ, ಶೇಖಾವತಿ, ಮೇವಾಡಿ, ಸಿರೋಹಿ ಮುಂತಾದವು ಪಶ್ಚಿಮ ರಾಜಸ್ತಾನಿ ಭಾಷೆಗಳು. ರಾಜಸ್ತಾನದ ಜೋಧ್‍ಪುರ, ಬಿಕನೀರ್, ಜೈಸಲ್ಮೇರ್, ಉದಯಪುರ್ ಮುಂತಾದ ಕಡೆಗಳಲ್ಲಿ ಈ ಭಾಷೆಗಳು ಹೆಚ್ಚು ಬಳಕೆಯಲ್ಲಿವೆ.

2. ಉತ್ತರ-ಪೂರ್ವ ರಾಜಸ್ತಾನಿ : ಅಹಿರಾವತಿ, ಮೇವಾತಿ ಮುಂತಾದ ಭಾಷೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. ರಾಜಸ್ತಾನದ ಅಲವರ್, ಭರತ್‍ಪುರ್, ಗುಢಗಾವ್ ಮುಂತಾದ ಕಡೆಗಳಲ್ಲಿ ಈ ಭಾಷೆಗಳು ಹೆಚ್ಚುಬಳಕೆಯಲ್ಲಿವೆ.

3. ಮಧ್ಯ-ಪೂರ್ವ ರಾಜಸ್ತಾನಿ : ಜಯಪುರಿ, ಕಿಶಾನ್‍ಗಢಿ, ಅಜ್ಮೀರಿ ಮುಂತಾದ ಭಾಷೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. ರಾಜಸ್ತಾನದ ಜಯಪುರ್, ಕೊಟ, ಬುಂದಿ ಮುಂತಾದ ಕಡೆಗಳಲ್ಲಿ ಈ ಭಾಷೆಗಳು ಹೆಚ್ಚು ಬಳಕೆಯಲ್ಲಿವೆ. 

4. ದಕ್ಷಿಣ-ಪೂರ್ವ ರಾಜಸ್ತಾನಿ : ಮಾಲವಿ, ನಿಮಾಡಿ ಭಾಷೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. ಮಾಲವಿಯನ್ನು ಮಾಲವಾದಲ್ಲೂ ನಿಮಾಡಿಯನ್ನು ನಿಮಾಡದಲ್ಲೂ ಹೆಚ್ಚು ಜನರು ಬಳಸುತ್ತಾರೆ. ಸೌರಾಷ್ಟ್ರೀ ಮತ್ತು ಭೀಲಿ ಭಾಷೆಗಳೂ ಈ ವರ್ಗಕ್ಕೆ ಸೇರುತ್ತವೆ. ಅಹಿರಾವತಿ, ಮೇವಾತಿ, ಮಾಲವಿ, ಮೇವಾಡಿ ಭಾಷೆಗಳಲ್ಲಿ ಪಶ್ಚಿಮ ಹಿಂದೀ ಭಾಷೆಯ ಅನೇಕ ಅಂಶಗಳಿರುವುದು ಕಂಡುಬರುತ್ತವೆ.

ಗ್ರಿಯರ್‍ಸನ್‍ನ ಈ ಬಗೆಯ ವರ್ಗೀಕರಣವನ್ನು ಗಮನಿಸಿದ ಕೆಲವು ವಿದ್ವಾಂಸರು ರಾಜಸ್ತಾನದಾದ್ಯಂತ ಬಳಕೆಯಲ್ಲಿರುವ ಭಾಷೆಗಳನ್ನು ತಮ್ಮದೇ ಆದ ರೀತಿಯಲ್ಲಿ ವರ್ಗೀಕರಿಸಿಕೊಳ್ಳಲು ಪ್ರಯತ್ನಮಾಡಿದರು. ಮಾರವಾಡಿಯನ್ನು ಪಶ್ಚಿಮ ರಾಜಸ್ತಾನಿ ಎಂದೂ ಜಯಪುರಿ, ಕಿಶಾನ್‍ಗಢಿ, ಅಜ್ಮೀರಿ, ಹರೌತಿ ಮುಂತಾದ ಭಾಷೆಗಳನ್ನು ಪೂರ್ವ ರಾಜಸ್ತಾನಿ ಎಂದೂ ಮಾಲವಿ ಮುಂತಾದವುಗಳನ್ನು ದಕ್ಷಿಣ ಪೂರ್ವ ರಾಜಸ್ತಾನಿ ಎಂದೂ ಭೀಲಿ, ಸೌರಾಷ್ಟ್ರೀ ಮುಂತಾದ ಭಾಷೆಗಳನ್ನು ದಕ್ಷಿಣ ರಾಜಸ್ತಾನಿ ಎಂದೂ ವರ್ಗೀಕರಿಸಲಾಗಿದೆ.

ರಾಜಸ್ತಾನಿ ಭಾಷೆಯನ್ನು ಬರೆಯಲು ಕೆಲವರು ನಾಗರಿಲಿಪಿಯನ್ನೂ ಮತ್ತೆ ಕೆಲವರು ಮಹಾಜನಿ ಲಿಪಿಯನ್ನೂ ಬಳಸುವರು. ಸಿಂಧ್ ಮತ್ತು ಪಂಜಾಬ್ ಗಡಿಭಾಗದಲ್ಲಿ ರಾಜಸ್ತಾನಿ ಭಾಷೆಯನ್ನು ಬರೆಯಲು ಕೆಲವರು ಪಾರಸಿ ಲಿಪಿಯನ್ನು ಬಳಸುವರು. ರಾಜಸ್ತಾನಿ ಭಾಷೆ ಶೌರಸೇನಿ ಪ್ರಾಕೃತದ ನಾಗರಿ ಅಪಭ್ರಂಶದ ಬೇರೊಂದು ರೂಪದಿಂದ ವಿಕಾಸಗೊಂಡಿರಬಹುದೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟರೆ. ಮತ್ತೆ ಕೆಲವರು ಇದು ಗೂರ್ಜರ ಅಪಭ್ರಂಶದಿಂದ ವಿಕಾಸಗೊಂಡಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 									            
 (ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ